Advocate

Advocate

Friday, April 17, 2020

Covid 19 Lockdown time photos


                                        Mobile Photography    : Redmi Note 7 Pro Mobile






























Friday, April 3, 2020

 
ಮೋಟಾರು ವಾಹನದ ನೊಂದಣಿ, ಪರವಾನಗಿ, ಮಾಲೀಕತ್ವ ವರ್ಗಾವಣೆ ಮತ್ತು ವಿಮೆ
ಭಾರತ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ದೇಶವಾಗಿದೆ. ಹಲವಾರು ಆಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳು ಭಾರತೀಯರಿಗೆ ಲಭ್ಯವಾಗುತ್ತಿವೆ. ಅದರೊಂದಿಗೆ ಆಧುನಿಕ ತಂತ್ರಜ್ಞಾನ ಬಳಕೆಯ ಕೌಶಲ್ಯ ಹಾಗೂ ಕಾನೂನಿಗನ್ವಯವಾಗಿ ತಂತ್ರಜ್ಞಾನವನ್ನು ಬಳಕೆ ಮಾಡುವ ಜವಾಬ್ದಾರಿಯೂ ಸಹ ಹೆಚ್ಚುತ್ತಿದೆ. ಅಂತಹ ತಂತ್ರಜ್ಞಾನದ ಬಳಕೆಯ ಕೌಶಲ್ಯ ಹಾಗೂ ಕಾನೂನಿನ ಅರಿವು ಇಲ್ಲದಿರುವುದು ನಮ್ಮಲ್ಲಿ ಎದ್ದು ಕಾಣುತ್ತಿದೆ.
ಭಾರತದಲ್ಲಿ ದ್ವಿಚಕ್ರ ವಾಹನ ಇಲ್ಲವೇ ಲಘುವಾಹನ (ನಾಲ್ಕು ಚಕ್ರದ ವಾಹನ) ಬಳಕೆ ಪ್ರತಿಯೊಂದು ಕುಟುಂಬದ ಅವಿಭಾಜ್ಯ ಅಂಗವಾಗಿದೆ. ಆದರೆ ಅದರ ಬಳಕೆಯಲ್ಲಿನ ಕೌಶಲ್ಯ ಹಾಗೂ ಕಾನೂನಿನ ಅರಿವು ಇಲ್ಲದಿರುವುದು ಹಲವಾರು ರೀತಿಯ ಅಪರಾಧಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ವಾಹನಗಳ ಬಳಕೆಯಲ್ಲಿ ನಾವು ನಮ್ಮ ಸಾಮಾಜಿಕ ಜವಾಬ್ದಾರಿಯನ್ನೂ ಸಹ ಅರಿತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ೨೦೧೫ರಲ್ಲಿ ಬಿಡುಗಡೆ ಮಾಡಿರುವ  ʻGlobal Road Safety Report 2015ʼ ರ ವರದಿಯಂತೆ ಪ್ರತಿ ವರ್ಷ ಭಾರತದಲ್ಲಿ ಮೋಟಾರು ವಾಹನಗಳ ಅಪಘಾತದಿಂದ ಬರೋಬರಿ ಒಂದು ಲಕ್ಷ ಜನರು ಮರಣ ಹೊಂದುತ್ತಿದ್ದಾರೆ. ಒಟ್ಟಾರೆ ಮರಣಗಳಲ್ಲಿ ಶೇ.25% ಮಂದಿ ದ್ವಿಚಕ್ರ ವಾಹನದ ಸವಾರರಾಗಿದ್ದಾರೆ. ಪ್ರತೀ ದಿವಸ 20 ಮಂದಿ 14 ವರ್ಷದ ಒಳಗಿನ ಮಕ್ಕಳು ಹಾಗೂ ಬರೋಬ್ಬರಿ 377 ಜನರು ದ್ವಿಚಕ್ರವಾಹನದ ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. ವಾಹನ ಸವಾರರ ಮರಣಗಳ ಸಂಖ್ಯಾನುಪಾತದಲ್ಲಿ ಬೆಂಗಳೂರು ಭಾರತದ ನಗರಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಇದು ಕೇವಲ ವಾಹನಗಳ ಬಳಕೆಯ ಕೌಶಲ್ಯದ ಕೊರತೆಯಷ್ಟೇ ಅಲ್ಲದೇ ಕಾನೂನಿನ ಅರಿವಿನ ಕೊರತೆಯೂ ಹೌದು.. ಅಷ್ಟೇ ಅಲ್ಲದೇ ಅಪಘಾತವಾದ ನಂತರ ಗಾಯಾಳುವಿಗೆ ಚಿಕಿತ್ಸೆಗೆ ನೆರವಾಗಬೇಕೆಂಬ ಕನಿಷ್ಟ ಖಾಳಜಿ ವಹಿಸದೇ, ವಾಹನ ಚಾಲಕ ಅಥವಾ ಜನಸಾಮನ್ಯರಾಗಿ ನಾವು ಮಾಡಬಹುದಾದ ಸಾಮಾಜಿಕ ಜವಾಬ್ದಾರಿಯನ್ನೇ ಮರೆತಿದ್ದೇವೆ..

ಕಾನೂನನ್ನು ಅರಿಯದೇ ಸಾಮಾಜಿಕ ಜವಾಬ್ದಾರಿಯನ್ನಾಗಲೀ ಅಥವಾ ವಾಹನ ಚಲಾವಣೆಯ ರೀತಿ ರಿವಾಜುಗಳನ್ನಾಗಲೀ ನಾವು ಕಲಿಯಲು ಸಾಧ್ಯವಿಲ್ಲ. ಮೋಟಾರು ವಾಹನ ಕಾಯ್ದೆ 1988, ಭಾರತಾದ್ಯಂತ ಜಾರಿಯಲ್ಲಿರುವ ಕಾನೂನಾಗಿದ್ದು, ವಾಹನಗಳ ಬಳಕೆ, ನೊಂದಣಿ, ಪರವಾನಗಿ, ಮಾಲೀಕತ್ವದ ಹಕ್ಕು ‍‍ಮತ್ತು ಜವಾಬ್ದಾರಿಯನ್ನು ತಿಳಿಸುತ್ತದೆ, ವಾಹನಕ್ಕೆ ವಿಮೆ ಮಾಡಿಸುವುದರ ಮಹತ್ವದ ಕುರಿತೂ ನಿಯಮಾವಳಿಗಳನ್ನು ಒಳಗೊಂಡಿದೆ.

ವಾಹನ ನೊಂದಣಿ ಮತ್ತು ಅದರ ಅಗತ್ಯತೆ:  
ಮೋಟಾರು ವಾಹನ ಕಾಯ್ದೆ 1988 ರ ಕಲಂ 39ರ ಪ್ರಕಾರ “ಯಾವುದೇ ವ್ಯಕ್ತಿ ಹಾಗೂ ಯಾವುದೇ ವಾಹನದ ಮಾಲೀಕರು ವಾಹನ ನೊಂದಣಿಯಾಗದ ಹೊರತು ಅಂತಹ ವಾಹನಗಳನ್ನು ಬಳಸುವ, ಚಾಲನೆ ಮಾಡುವ ಅಥವಾ ಬೇರೋಬ್ಬರಿಗೆ ಚಾಲನೆಗೆ ಅವಕಾಶ ಮಾಡಿಕೊಡುವಂತಿಲ್ಲ. ಹಾಗಾಗಿ ಪ್ರತಿಯೊಂದು ವಾಹನವೂ ಮೋಟಾರು ವಾಹನ ಕಾಯ್ದೆ 1988ರಡಿಯಲ್ಲಿ ನೊಂದಣಿಯಾಗಿರಬೇಕಾಗುತ್ತದೆ. ಒಟ್ಟಾರೆಯಾಗಿ ವಾಹನ ನೊಂದಣಿಯಾಗದ ಹೊರತು ವಾಹನವನ್ನು ಬಳಸುವಂತಿಲ್ಲ.
ವಾಹನ ಬಳಕೆ ಮಾಡುತ್ತಿರುವ ಸ್ಥಳ ಅಥವಾ ವಾಹನದ ಮಾಲೀಕರು ವಾಸ ಮಾಡುತ್ತಿರುವ ಸ್ಥಳದ ವ್ಯಾಪ್ತಿಗೆ ಬರುವ ನೊಂದಣಾಧಿಕಾರಿಯ ಕಛೇರಿಯಲ್ಲಿ ವಾಹನದ ನೊಂದಣಿ ಮಾಡಿಸಬೇಕಾಗುತ್ತದೆ. ಮಾಲೀಕರು ಅಗತ್ಯವಾಗಿರುವ ದಾಖಲಾತಿಗಳು, ಶುಲ್ಕ ಪಾವತಿಸಿ ತಮ್ಮ ವಾಹನವನ್ನು ನೊಂದಣಿ ಮಾಡಿಸಬಹುದಾಗಿದ್ದು, ಆ ಸಮಯದಲ್ಲಿ ಕಡ್ಡಾಯವಾಗಿ ವಾಹನವನ್ನು ನೊಂದಣಾಧಿಕಾರಿಯ ಮುಂದೆ ಹಾಜರು ಪಡಿಸಬೇಕಾಗಿರುತ್ತದೆ. ನೊಂದಣಾಧಿಕಾರಿಗಳು ದಾಖಲಾತಿಗಳನ್ನು ಪರೀಶೀಲಿಸಿ ನೊಂದಣಿಯನ್ನು ಮಾಡುವ, ನವೀಕರಿಸುವ ಅಥವಾ ನಿರಾಕರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ವಾಹನ ನೊಂದಣಿಯನ್ನು ಮಾಡಿದಾಗ, ಆ ವಾಹನಕ್ಕೆ ನೊಂದಣಿ ಸರ್ಟಿಫಿಕೇಟ್‌ ನೀಡುವುದಲ್ಲದೇ, ವಾಹನಕ್ಕೆ ನೀಡುವ ಸಂಖ್ಯೆಯು ನೊಂದಣಿ ಚಿಹ್ನೆಯಾಗಿರುತ್ತದೆ. ಈ ರೀತಿ ನೀಡುವ ವಾಹನದ ನೊಂದಣಿ ಸರ್ಟಿಫಿಕೇಟ್‌ ಭಾರತಾದ್ಯಂತ ವಾಹನವನ್ನು ಬಳಕೆ ಮಾಡಲು ಯೋಗ್ಯವಾಗಿರುತ್ತದೆ. ಅಲ್ಲದೇ ಈ ಕೆಳಕಂಡ ಕಾರಣಗಳಿಗಾಗಿ ನೊಂದಣಾಧಿಕಾರಿಯು ವಾಹನದ ನೊಂದಣಿಯನ್ನು ನಿರಾಕರಿಸಬಹುದಾಗಿರುತ್ತದೆ. 
    1. ಕಳ್ಳತನಕ್ಕೆ ಒಳಗಾದ ವಾಹನವನ್ನು ನೊಂದಣಿಗೆ ಹಾಜರು ಮಾಡಿದ್ದರೇ
    2.   ವಾಹನವು ಬಳಕೆಗೆ ಯೋಗ್ಯವಾಗಿಲ್ಲದಿದ್ದರೆ
    3.   ಮೋಟಾರು ವಾಹನ ಕಾಯ್ದೆಯ ನಿಯಮಗಳಿಗೆ ಪೂರಕವಾಗಿರದೇ ಇದ್ದಲ್ಲಿ
    4.   ಮಾಲೀಕರು ವಾಹನದ ನೊಂದಣಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ
    5.   ಮಾಲೀಕರು ಪರಿಪೂರ್ಣ ಮಾಹಿತಿಯನ್ನು ನೊಂದಣಾಧಿಕಾರಿಗೆ ನೀಡದಿದ್ದಲ್ಲಿ
    6.   ಮಾಲೀಕರು ನೊಂದಣಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ವಾಹನದ ಬಣ್ಣ, ಇಂಜಿನ್‌ ಮುಂತಾದ   
       ಬದಲಾವಣೆಗಳನ್ನು ಮಾಡಿದ್ದಲ್ಲಿ.
ವಾಹನದ ನೊಂದಣಿಯನ್ನು ನಿರಾಕರಿಸುವಂತೆಯೇ ನೊಂದಣಾಧಿಕಾರಿಗಳು, ನೊಂದಣಿಯಾಗಿರುವ ವಾಹನದ ನೊಂದಣಿಯನ್ನೂ ಸಹ ತಡೆಹಿಡಿಯಲು ಹಾಗೂ ನೊಂದಣಿಯನ್ನು ವಜಾಮಾಡುವ ಅಧಿಕಾರವೂ ಇರುತ್ತದೆ. ಅಂತಹ ಸಂದರ್ಭಗಳೆಂದರೆ,                   
1.    ವಾಹನದ ಮೂಲ ನೊಂದಣಾಧಿಕಾರಿಗಳು ವಾಹನ ನೊಂದಣಿಯನ್ನು ವಜಾ ಮಾಡಿದ್ದರೆ, ಮರು ನೊಂದಣಿಯನ್ನು ಅಥವಾ ನವೀಕರಣವನ್ನು ನೊಂದಣಾಧಿಕಾರಿಗಳು ತಡೆಹಿಡಿಯಬಹುದು.
2. ಮಾಲೀಕರು ನೊಂದಣಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ವಾಹನದ ಬಣ್ಣ, ಇಂಜಿನ್‌ ಮುಂತಾದ ಬದಲಾವಣೆಗಳನ್ನು (Alteration) ಮಾಡಿದ್ದು, ಬದಲಾವಣೆ ಮಾಡಿಕೊಂಡ 14 ದಿವಸಗಳ ಒಳಗಾಗಿ ಬದಲಾವಣೆಯ ಕುರಿತು ನೊಂದಣಾಧಿಕಾರಿಗಳಿಗೆ ಮಾಹಿತಿ ನೀಡದಿದ್ದ ಪಕ್ಷದಲ್ಲಿ ಅಂತಹ ವಾಹನದ ನೊಂದಣಿಯನ್ನು ವಜಾ ಮಾಡಬಹುದು.
3.   ವಾಹನವು ಬಳಕೆಗೆ ಯೋಗ್ಯವಾಗಿಲ್ಲ ಎಂಬುದಾಗಿ ನೊಂದಣಾಧಿಕಾರಿಗಳಿಗೆ ಮಾಹಿತಿ ಬಂದಲ್ಲಿ
4.   ವಾಹನವನ್ನು ಶಾಶ್ವತವಾಗಿ ಭಾರತದಿಂದ ಹೊರಗೆ ತೆಗೆದುಕೊಂಡು ಹೋಗಿದ್ದಲ್ಲಿ, ನೊಂದಣಿಯನ್ನು ವಜಾ ಮಾಡಬಹುದು.
5.   ನಕಲಿ ದಾಖಲೆಗಳನ್ನು ಹಾಜರು ಪಡಿಸಿ ವಾಹನದ ನೊಂದಣಿಯನ್ನು ಮಾಡಿಸಿದ್ದರೆ, ನೊಂದಣಿಯನ್ನು ವಜಾ ಮಾಡಬಹುದು. 

   
ಇನ್ನೂ ಮುಂತಾದ ಕಾನೂನಾತ್ಮಕ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ನೊಂದಣಾಧಿಕಾರಿಯು ವಾಹನದ ನೊಂದಣಿಯನ್ನು ವಜಾ ಮಾಡಬಹುದಾಗಿರುತ್ತದೆ.



ಪರವಾನಗಿ:
ಯಾವ ರೀತಿ ವಾಹನದ ನೊಂದಣಿಯು ಮೋಟಾರು ವಾಹನ ಕಾಯ್ದೆಯ 1988ರ ಕಲಂ 39ರಂತೆ ಕಡ್ಡಾಯವಾಗಿರುತ್ತದೆಯೋ ಅದೇ ರೀತಿ ವಾಹನ ಚಾಲನೆಯ ಪರವಾನಗಿಯೂ ಕೂಡ ಕಡ್ಡಾಯವಾಗಿರುತ್ತದೆ. ಮೋಟಾರು ವಾಹನ ಕಾಯ್ದೆ 1988ರ ಕಲಂ 3 ರಂತೆ “ ಯಾವುದೇ ವ್ಯಕ್ತಿ ತನ್ನ ವಾಹನವನ್ನು ಹಾಗೂ ಸಾರಿಗೆ ವಾಹನವನ್ನು ಸೂಕ್ತ ಚಾಲನಾ ಪರವಾನಗಿಯನ್ನು ಹೊಂದಿರದ ಹೊರತು ಸಾರ್ವಜನಿಕ ಸ್ಥಳದಲ್ಲಿ ಚಲಾಯಿಸುವಂತಿಲ್ಲ (ಕ್ಯಾಬ್‌ ಅಥವಾ ಬಾಡಿಗೆ ವಾಹನವನ್ನು ಸ್ವಂತ ಉಪಯೋಗಕ್ಕೆ ಪಡೆದಿದ್ದನ್ನು ಹೊರತುಪಡಿಸಿ)”, ಹಾಗಾಗಿ ಪ್ರತಿಯೊಂದು ವಾಹನವನ್ನು ಚಾಲನೆ ಮಾಡಲು ವಾಹನದ ನೊಂದಣಿ ಹಾಗೂ ಪರವಾನಗಿ ಅಗತ್ಯವಾಗಿರುತ್ತದೆ. ಒಂದು ವೇಳೆ ನೊಂದಣಿ ಇಲ್ಲದ ಅಥವಾ ಪರವಾನಗಿ ಇಲ್ಲದ ವಾಹನ ಅಪಘಾತಕ್ಕೆ ಒಳಗಾದರೆ, ಆ ವಾಹನದ ಮಾಲೀಕನೇ ಆಗಬಹುದಾದ ನಷ್ಟವನ್ನು ಭರ್ತಿ ಮಾಡಬೇಕಾಗಿರುತ್ತದೆಯೇ ವಿನಃ ವಿಮೆದಾರರು ಅದಕ್ಕೆ ಜವಾಬ್ದಾರರಾಗುವುದಿಲ್ಲ.
ಪರವಾನಗಿ ಪಡೆಯಲು ಇರುವ ವಯೋಮಿತಿ:
ಮೋಟಾರು ವಾಹನ ಕಾಯ್ದೆ 1988ರಂತೆ ವಾಹನ ಚಾಲನೆ ಮಾಡಲು ಅಗತ್ಯವಿರುವ ಪರವಾನಗಿಯನ್ನು ಪಡೆಯಲು ಈ ಕೆಳಕಂಡ ವಯೋಮಿತಿಯನ್ನು ನಿಗಧಿ ಪಡಿಸಲಾಗಿದೆ.
1.    ಯಾವ ವ್ಯಕ್ತಿ 18 ವರ್ಷಗಳನ್ನು ಪೂರೈಸಿರುವುದಿಲ್ಲವೋ ಅಂತಹ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ವಾಹನವನ್ನು ಚಾಲನೆ ಮಾಡುವಂತಿಲ್ಲ. ಪರಂತು 50 ಸಿಸಿ ಮೀರದ ದ್ವಿಚಕ್ರ ವಾಹನವನ್ನು 16 ವರ್ಷ ಪೂರ್ಣಗೊಂಡ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಚಲಾಯಿಸಬಹುದಾಗಿರುತ್ತದೆ.
2.   ಯಾವ ವ್ಯಕ್ತಿ 20 ವರ್ಷಗಳನ್ನು ಪೂರ್ಣಗೊಳಿಸಿರುವುದಿಲ್ಲವೋ ಅಂತಹ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಸಾರಿಗೆ ವಾಹನವನ್ನು ಚಲಾಯಿಸುವಂತಿಲ್ಲ.
ಈ ರೀತಿಯ ವಯೋಮಿತಿ ಹೊಂದಿರದ ವ್ಯಕ್ತಿಗೆ ಕಲಿಕೆ ಪರವಾನಗಿ ಹಾಗೂ ಚಾಲನಾ ಪರವಾನಗಿಯನ್ನು ನೀಡಲಾಗುವುದಿಲ್ಲ. ಅಲ್ಲದೇ ಈ ಮಯೋಮಿತಿ ಹೊಂದದೇ ಇರುವ ವ್ಯಕ್ತಿಗೆ ವಾಹನದ ಮಾಲೀಕರು ವಾಹನವನ್ನು ಚಾಲನೆಗೆ ನೀಡುವಂತಿಲ್ಲ. ಉದಾಹರಣೆಗೆ: ದ್ವಿಚಕ್ರವಾಹನ ಮಾಲೀಕರಾದ ತಂದೆ ಅಥವಾ ತಾಯಿ 18 ವರ್ಷ ಪೂರೈಸದ ಮಕ್ಕಳಿಗೆ ದ್ವಿಚಕ್ರ ಅಥವಾ ಲಘು ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಚಾಲನೆಗೆ ನೀಡುವಂತಿಲ್ಲ. ಒಂದು ವೇಳೆ ನೀಡಿದ ಪಕ್ಷದಲ್ಲಿ ಅವರ ಪರವಾನಗಿ ರದ್ದು ಪಡಿಸುವ ಅಧಿಕಾರ ನೊಂದಣಾಧಿಕಾರಿಗಳಿಗಿರುತ್ತದೆ ಹಾಗೂ ಒಂದು ವೇಳೆ ಅಂತಹ ವಾಹನ ಅಫಘಾತವಾದ ಪಕ್ಷದಲ್ಲಿ ಮಕ್ಕಳು ಮಾಡುವ ಅಪಘಾತಕ್ಕೆ ತಂದೆ ಅಥವಾ ತಾಯಿ ಯಾರು ಮಾಲೀಕರಾಗಿರುತ್ತಾರೆಯೋ ಅಂತಹವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಮತ್ತು ನಷ್ಟ ಭರ್ತಿ ಮಾಡುವ ಜವಾಬ್ದಾರಿ ಅವರ ಮೇಲಿರುತ್ತದೆ. ಅಲ್ಲದೇ ಯಾರ ಬಳಿ ವಾಹನ ಚಾಲನಾ ಪರವಾನಗಿ ಇರುವುದಿಲ್ಲವೋ ಅಂಥವರಿಗೂ ಕೂಡ ಮಾಲೀಕರು ವಾಹನವನ್ನು ಚಾಲನೆಗೆ ನೀಡುವಂತಿಲ್ಲ. ಆಗಲೂ ಕೂಡ ಮೇಲಿನ ನಿಯಮ ಅನ್ವಯವಾಗಲಿದೆ.  
ಪರವಾನಗಿ ನೀಡುವ , ನಿರ್ಬಂಧಿಸುವ ಹಾಗೂ ಪರವಾನಗಿ ರದ್ದುಗೊಳಿಸುವ ಸಂದರ್ಭ:
ಕಲಿಕಾ ಪರವಾನಗಿ ಹಾಗೂ ಪರವಾನಗಿಯನ್ನು ಈ ಕೆಳಕಂಡ ವಾಹನಗಳಿಗೆ ಪಡೆಯಬಹುದಾಗಿದೆ  
         1. ಗೇರುಗಳನ್ನು ಹೊಂದಿರುವ ಮೋಟಾರು ವಾಹನ
     2.   ಗೇರುಗಳಿಲ್ಲದ ಮೋಟಾರು ವಾಹನ
     3.   ಸಾರಿಗೆ ವಾಹನ
     4.   ಅಮಾನ್ಯ ಗಾಡಿ ( Invalid carriage)
     5.   ಲಘು ವಾಹನ
     6.   ಸಾರಿಗೆ ವಾಹನ
     7.   ರಸ್ತೆಯುರುಳು ವಾಹನ (ರೋಡ್‌ ರೋಲರ್‌)
ಮೇಲ್ಕಂಡ ವಿವಿಧ ವಾಹನಗಳಿಗೆ ಪರವಾನಿಗಿ ಪಡೆಯುವ ಪೂರ್ವದಲ್ಲಿ ಕಲಿಕಾ ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವ ವ್ಯಕ್ತಿಗೆ ವಾಹನ ಚಾಲನಾ ಪರವಾನಗಿ ನಿರಾಕರಿಸಲಾಗಿರುತ್ತದೆಯೋ ಅಂತಹವರಿಗೆ ಕಲಿಕಾ ಪರವಾನಗಿ ನೀಡುವುದನ್ನು ನಿರಾಕರಿಸಲಾಗುತ್ತದೆ. ಕಲಿಕಾ ಪರವಾನಗಿ ಪಡೆದ ನಿಗದಿತ ಸಮಯದ ನಂತರ ಚಾಲನಾ ಪರವಾನಗಿಯನ್ನು ಪಡೆಯಬಹುದಾಗಿರುತ್ತದೆ.
ಕಲಿಕಾ ಹಾಗೂ ಚಾಲನಾ ಪರವಾನಗಿಯನ್ನು ಪಡೆಯಲು ಹಲವಾರು ನಿರ್ಬಂಧಗಳನ್ನು ಮೋಟಾರು ವಾಹನ ಕಾಯ್ದೆಯಲ್ಲಿ ಅಳವಡಿಸಲಾಗಿದೆ. ಅವುಗಳೆಂದರೆ,
1.    ಕಲಿಕಾ ಅಥವಾ ಚಾಲನಾ ಪರವಾನಗಿಯನ್ನು ಹೊಂದಿರುವವರು ತಮ್ಮ ಪರವಾನಗಿಯನ್ನು ಬೇರೆಯವರಿಗೆ ಹಸ್ತಾಂತರಿಸುವಂತಿಲ್ಲ.
2.   ಒಂದು ವಿಧದ ವಾಹನದ ಚಾಲನೆಗೆ ಪಡೆದ ಪರವಾನಗಿಯನ್ನು ಬಳಸಿ ಬೇರೊಂದು ವಿಧದ ವಾಹನ ಚಾಲನೆ ಮಾಡುವಂತಿಲ್ಲ. ಉದಾಹರಣೆಗೆ: ದ್ವಿಚಕ್ರ ವಾಹನದ ಚಾಲನಾ ಪರವಾನಗಿ ಪಡೆದು ಲಘು ವಾಹನದ ಚಲಾವಣೆ ಮಾಡುವಂತಿಲ್ಲ.
3.   ಲಘು ವಾಹನದ ಪರವಾನಗಿಯನ್ನು ಪಡೆದು ಒಂದು ವರ್ಷ ವಾಹನ ಚಾಲನೆ ಮಾಡಿದ ಅನುಭವವಿದ್ದರೆ ಮಾತ್ರ ಸಾರಿಗೆ ವಾಹನದ ಪರವಾನಗಿಯನ್ನು ನೀಡಲಾಗುತ್ತದೆ.
4.   18 ವರ್ಷದ ವಯೋಮಿತಿ ಮೀರದ ವ್ಯಕ್ತಿಗಳಿಗೆ ಗೇರು ಹೊಂದಿಲ್ಲದ ವಾಹನ ಚಲಾವಣೆಗೆ ಕಲಿಕಾ ಪರವಾನಗಿಯನ್ನು, ಚಾಲನಾ ಪರವಾನಗಿ ಹೊಂದಿರುವ ಆತನ/ಆಕೆಯ ಪೋಷಕರ ಲಿಖಿತ ಕೋರಿಕೆಯ ಮೇರೆಗೆ ಮಾತ್ರ ನೀಡಲಾಗುತ್ತದೆ.
5.   ಮೋಟಾರು ವಾಹನ ಕಾಯ್ದೆ ನಿಯಮದಂತೆ ವೈದ್ಯಕೀಯ ಪ್ರಮಾಣ ಪತ್ರ ನೀಡದ ಹೊರತು ಪರವಾನಿಗೆಯನ್ನು ನೀಡಲಾಗುವುದಿಲ್ಲ.
ಈ ಕೆಳಕಂಡ ಸಂದರ್ಭಗಳಲ್ಲಿ ನ್ಯಾಯಾಲಯ ಅಥವಾ ಪರವಾನಗಿ ನೀಡುವ ಪ್ರಾಧಿಕಾರ ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸಬಹುದಾಗಿರುತ್ತದೆ.
1.    ಯಾವುದೇ ವ್ಯಕ್ತಿ ನ್ಯಾಯಾಲಯದಿಂದ ಯಾವ ಅಪರಾಧಗಳಿಗೆ ಶಿಕ್ಷೆ ಅನುಭವಿಸಿದ್ದು, ಮತ್ತದೇ ರೀತಿಯ ಅಪರಾಧಗಳನ್ನು ಎಸಗಿದ್ದ ಪಕ್ಷದಲ್ಲಿ ನ್ಯಾಯಾಲಯವು ಅಂತಹ ವ್ಯಕ್ತಿಯ ಪರವಾನಗಿಯನ್ನು ತನ್ನ ವಿವೇಚನೆ ಮೇರೆಗೆ ನಿಗಧಿತ ಸಮಯದವರೆವಿಗೂ ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸಬಹುದಾಗಿರುತ್ತದೆ.
2.   ಯಾವುದೇ ವ್ಯಕ್ತಿ ವಾಹನ ಚಾಲನೆ ಮಾಡುವಾಗ ಅಪಘಾತ ಮಾಡಿದ್ದು ಅ) ಅಪಘಾತವಾದ ನಂತರ ವಾಹನ ನಿಲ್ಲಿಸದೇ ಪರಾರಿಯಾಗಿದ್ದರೆ, ಆ) ಅಪಘಾತವಾದ ನಂತರ ಚಾಲಕನು ಗಾಯಾಳುವಿಗೆ ಅಗತ್ಯವಾದ ವೈದ್ಯಕೀಯ ನೆರವು ನೀಡದೇ ಇದ್ದ ಪಕ್ಷದಲ್ಲಿ ಇ) ವಾಹನವನ್ನು ಅತೀ ವೇಗವಾಗಿ ಚಾಲನೆ ಮಾಡಿ ಅಪರಾಧ ರುಜುವಾತಾಗಿದ್ದಲ್ಲಿ ನ್ಯಾಯಾಲಯವು ಅಂತಹವರ ಚಾಲನಾ ಪರವಾನಗಿಯನ್ನು ಒಂದು ತಿಂಗಳ ಕಾಲಕ್ಕೆ ಕಡಿಮೆ ಇಲ್ಲದಂತೆ ರದ್ದು ಮಾಡಬಹುದಾಗಿರುತ್ತದೆ.
3.   ಯಾವುದೇ ವ್ಯಕ್ತಿ ತನ್ನ ವಾಹನವನ್ನು ಮದ್ಯ ಸೇವಿಸಿ ಅಥವಾ ಡ್ರಗ್ಸ್‌ನ ಮತ್ತಿನಲ್ಲಿ ಚಾಲನೆ ಮಾಡಿದ್ದರೆ ಅಥವಾ ಚಾಲನೆ ಮಾಡಲು ಪ್ರಯತ್ನಿಸಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿದ್ದರೆ, ಅಂತಹವರ ಚಾಲನಾ ಪರವಾನಗಿಯನ್ನು ಆರು ತಿಂಗಳ ಕಾಲಕ್ಕೆ ಕಡಿಮೆ ಇಲ್ಲದಂತೆ ರದ್ದು ಮಾಡಬಹುದಾಗಿರುತ್ತದೆ
4.  ಯಾವ ವ್ಯಕ್ತಿ ತನ್ನ ವಾಹನವನ್ನು ಸಾರ್ವಜನಿಕರ ಜೀವಕ್ಕೆ ಹಾನಿಯಾಗುವಂತೆ ಅಪಾಯಕಾರಿಯಾಗಿ ಚಲಾಯಿಸಿ ಶಿಕ್ಷೆಗೊಳಪಟ್ಟಿದ್ದು, ಅಂತಹದೇ ಅಪರಾಧವನ್ನು ಪುನರಾವರ್ತಿಸಿದ್ದರೆ ಅಂತಹವರ ಪರವಾನಗಿಯನ್ನು 5 ವರ್ಷಗಳ ಕಾಲದವರೆವಿಗೆ ನ್ಯಾಯಾಲಯ ರದ್ದುಗೊಳಿಸಬಹುದಾಗಿರುತ್ತದೆ.
5.   ಯಾವ ವ್ಯಕ್ತಿ ತನ್ನ ವಾಹನವನ್ನು ರೇಸುಗಳಿಗೆ ಅಥವಾ ಅತೀ ಹೆಚ್ಚು ವೇಗವಾಗಿ ಅಜಾಗರೂಕ ರೀತಿಯಲ್ಲಿ ಚಲಾಯಿಸಿದ್ದು, ಆ ಸಂಬಂದವಾಗಿ ಈ ಹಿಂದೆ ಅಂತಹದ್ದೇ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟಿದ್ದರೆ ಅಂತಹವರ ಪರವಾನಗಿಯನ್ನು 2 ವರ್ಷಗಳ ಕಾಲದವರೆವಿಗೆ ನ್ಯಾಯಾಲಯ ರದ್ದುಗೊಳಿಸಬಹುದಾಗಿರುತ್ತದೆ.
6.   ಯಾವ ವ್ಯಕ್ತಿ ತನ್ನ ವಾಹನವನ್ನು ನೊಂದಣಿ ಮಾಡಿಸದೇ ಚಾಲನೆ ಮಾಡಿರುತ್ತಾರೋ ಅಂತಹವರ ಪರವಾನಗಿಯನ್ನು 1 ವರ್ಷಗಳ ಕಾಲದವರೆವಿಗೂ ರದ್ದುಗೊಳಿಸಬಹುದಾಗಿರುತ್ತದೆ.
7.   ಅದಲ್ಲದೇ ಪರವಾನಗಿ ಪ್ರಾಧಿಕಾರವೂ ಸಹ ಈ ಕೆಳಕಂಡ ಸಂದರ್ಭಗಳಲ್ಲಿ ಪರವಾನಗಿಯನ್ನು ರದ್ದುಗೊಳಿಸಬಹುದಾಗಿರುತ್ತದೆ.
ಅ) ಯಾವ ವ್ಯಕ್ತಿ ತನ್ನ ವಾಹನವನ್ನು ಸಾರ್ವಜನಿಕರ ಜೀವಕ್ಕೆ ಹಾನಿಯಾಗುವಂತೆ ಅಪಾಯಕಾರಿಯಾಗಿ ಚಲಾಯಿಸಿದ್ದು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದು, ಮತ್ತೆ ಅಂತಹದೇ ಪ್ರಕರಣ ದಾಖಲಾಗಿದ್ದರೆ ಪ್ರಾಧಿಕಾರವು ಅಂತಹವರ ಪರವಾನಗಿಯನ್ನು 6 ತಿಂಗಳುಗಳ ಕಾಲ ರದ್ದುಗೊಳಿಸಬಹುದಾಗಿರುತ್ತದೆ.
ಆ) ನ್ಯಾಯಾಲಯವು ಪರವಾನಗಿ ರದ್ದು ಮಾಡುವ ಎಲ್ಲಾ ಸಂದರ್ಭಗಳಲ್ಲಿಯೂ ಪ್ರಾಧಿಕಾರವೂ ಸಹ ರದ್ದು ಮಾಡಬಹುದಾಗಿರುತ್ತದೆ.
ಮಾಲೀಕತ್ವ ವರ್ಗಾವಣೆ:
ವಾಹನದ ನೊಂದಣಿ, ಚಾಲನಾ ಪರವಾನಗಿಯಂತೆಯೇ ಮುಖ್ಯವಾದುದು ಮಾಲೀಕತ್ವದ ವರ್ಗಾವಣೆ.  ಸಾಮಾನ್ಯವಾಗಿ ವಾಹನವನ್ನು ಮಾರಾಟ ಮಾಡಿದ ನಂತರ ಮಾಲೀಕರು ವಾಹನದ ವರ್ಗಾವಣೆಗೆ ಸಂಬಂದಿಸಿದ ದಾಖಲೆಗಳಿಗೆ ಸಹಿ ಮಾಡಿಕೊಡುವುದು ವಾಡಿಕೆ. ಆದರೆ ತನ್ನ ಮಾಲೀಕತ್ವಕ್ಕೆ ಒಳಪಟ್ಟ ವಾಹನದ ಮಾಲೀಕತ್ವ ವರ್ಗಾವಣೆಯಾಗಿದೆಯೋ ಇಲ್ಲವೋ ಎಂಬುದನ್ನು ದೃಢಪಡಿಸಿಕೊಳ್ಳುವುದಿಲ್ಲ. ಇದರಿಂದಾಗಿ ಹಲವಾರು ರೀತಿಯ ಕಾನೂನು ಕುಣಿಕೆಗೆ ಸಿಲುಕುತ್ತಿದ್ದಾರೆ. ಹಾಗಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಮಾಲೀಕತ್ವದ ವರ್ಗಾವಣೆಯ ಬಗ್ಗೆಯೂ ಎಚ್ಚರವಹಿಸಬೇಕಾಗುತ್ತದೆ. ಮಾಲೀಕತ್ವ ವರ್ಗಾವಣೆ ಕುರಿತಂತೆ ಮೋಟಾರು ವಾಹನ ಕಾಯ್ದೆಯಲ್ಲಿನ ನಿಯಮ ಈ ರೀತಿ ಇದೆ.
1.   (ಅ) ಮಾಲೀಕ ವಾಸಿಸುವ ರಾಜ್ಯದಲ್ಲಿ ವಾಹನ ನೊಂದಣಿಯಾಗಿದ್ದರೆ, ವರ್ಗಾವಣೆ ನೀಡಿದ/ ಮಾರಾಟ ಮಾಡಿದ 14 ದಿವಸಗಳ ಒಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಮಾಹಿತಿಯನ್ನು ನೊಂದಣಾಧಿಕಾರಿಗೆ ನೀಡತಕ್ಕದ್ದು ಹಾಗೂ ಯಥಾ ಪ್ರತಿಯನ್ನು ವರ್ಗಾವಣೆ ಪಡೆದ ವ್ಯಕ್ತಿಗೂ ನೀಡತಕ್ಕದ್ದು.
(ಆ) ವಾಹನವು ಬೇರೆ ರಾಜ್ಯದಲ್ಲಿ ನೊಂದಣಿಯಾಗಿದ್ದರೆ, ವರ್ಗಾವಣೆ ನೀಡಿದ/ ಮಾರಾಟ ಮಾಡಿದ 35 ದಿವಸಗಳೊಳಗಾಗಿ ನಿರಪೇಕ್ಷಣಾ ಪತ್ರ ಹಾಗೂ ವಾಹನದ ನೊಂದಣಿಯು ನಿರಾಕರಣೆಯಾಗದೇ ಇರುವ ಕುರಿತು ದೃಢೀಕರಣ ಪತ್ರವನ್ನು ನೊಂದಣಾಧಿಕಾರಿಗಳಿಗೆ ಕಳುಹಿಸತಕ್ಕದ್ದು.
2. ವಾಹನವನ್ನು ವರ್ಗಾವಣೆ ಪಡೆದ ವ್ಯಕ್ತಿ ವಾಹನದ ಮಾಲೀಕತ್ವ ವರ್ಗಾವಣೆಯಾದ 30 ದಿವಸಗಳ ಒಳಗಾಗಿ ತಾನು ವಾಸಿಸುವ ವ್ಯಾಪ್ತಿಗೆ ಬರುವ ನೊಂದಣಾಧಿಕಾರಿಗಳಿಗೆ ವಾಹನ ವರ್ಗಾವಣೆಯಾದ ಕುರಿತು ಮಾಹಿತಿಯನ್ನು ನೀಡತಕ್ಕದ್ದು (ವಾಹನದ ನೊಂದಣಿ ಬೇರೆ ರಾಜ್ಯದಲ್ಲಾಗಿದ್ದರೆ ಮಾತ್ರ).
3. ಒಂದು ವೇಳೆ ವಾಹನ ಮಾಲೀಕನು ಮರಣ ಹೊಂದಿದ್ದರೆ ಅಥವಾ ಸರ್ಕಾರದ ಬಹಿರಂಗ ಹರಾಜಿನಲ್ಲಿ ವಾಹನವನ್ನು ಖರೀದಿ ಮಾಡಿದ್ದರೆ, ನಿಗದಿತ ಶುಲ್ಕ ಪಾವತಿಸಿ ವಾಹನವನ್ನು ಪಡೆದ ವ್ಯಕ್ತಿ ಮಾಲೀಕತ್ವ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ.
4. ಒಂದು ವೇಳೆ ಮಾಲೀಕ ಅಥವಾ ಖರೀದಿದಾರ ವಾಹನ ಮಾರಾಟ ಅಥವಾ ಖರೀದಿ ಬಗ್ಗೆ ನಿಗಧಿತ ಅವಧಿಯೊಳಗೆ ನೊಂದಣಾಧಿಕಾರಿಗೆ ಲಿಖಿತ ಮಾಹಿತಿಯನ್ನು ನೀಡದೇ ಇದ್ದ ಪಕ್ಷದಲ್ಲಿ ಹಾಗೂ ಖರೀದಿದಾರ ನಿಗಧಿತ ಅವಧಿಯೊಳಗೆ ವಾಹನವನ್ನು ತನ್ನ ಹೆಸರಿಗೆ ನೊಂದಣಿ ಮಾಡಿಕೊಳ್ಳದೇ ಇದ್ದ ಪಕ್ಷದಲ್ಲಿ, ದಂಡ ಶುಲ್ಕ ಪಾವತಿ ಮಾಡಿ ಮಾಲೀಕತ್ವ ವರ್ಗಾವಣೆ ಮಾಡಿಕೊಳ್ಳಬಹುದಾಗಿರುತ್ತದೆ. ಒಂದು ವೇಳೆ ಖರೀದಿದಾರ ಆತನ ಹೆಸರಿಗೆ ಮಾಲೀಕತ್ವ ವರ್ಗಾವಣೆ ಮಾಡಿಕೊಳ್ಳದೇ ವಾಹನವನ್ನು ಬಳಸಿದ್ದಾದಲ್ಲಿ ಹಾಗೂ ಮಾಲೀಕನು ಮಾರಾಟದ ಬಗ್ಗೆ ಲಿಖಿತ ಮಾಹಿತಿಯನ್ನು ನೀಡದೇ ಇದ್ದ ಪಕ್ಷದಲ್ಲಿ, ಆ ವಾಹನ ಅಕ್ರಮ ಬಳಕೆ, ಅಪಘಾತ ಮುಂತಾದ ಎಲ್ಲಾ ಆಗುಹೋಗುಗಳಿಗೂ ನೊಂದಣಿದಾರನಾಗಿರುವ ಮಾಲೀಕನೇ ಜವಾಬ್ದಾರನಾಗಿರುತ್ತಾನೆ. ಉದಾ: ʻʼ ಎಂಬುವವನು ಕಾರಿನ ಮಾಲೀಕನಾಗಿದ್ದು, ಸದರಿ ಕಾರನ್ನು ʻಬಿʼ ಗೆ ಮಾರಾಟ ಮಾಡುತ್ತಾನೆ. ಆದರೆ ಮಾಲೀಕ ತಾನು ಮಾರಾಟ ಮಾಡಿದ ಕುರಿತು ಮಾಹಿತಿಯನ್ನು ನೀಡುವುದಿಲ್ಲ. ʻಬಿʼ ಖರೀದಿ ಮಾಡಿದ ಕಾರನ್ನು ತನ್ನ ಹೆಸರಿಗೆ ನೊಂದಣಿ ಮಾಡಿಕೊಳ್ಳುವುದಿಲ್ಲ ಹಾಗೂ ಸದರಿ ಕಾರನ್ನು ಮಧ್ಯವನ್ನು ಅಕ್ರಮವಾಗಿ ಸಾಗಣೆ ಮಾಡಲು ಬಳಸುತ್ತಾನೆ. ಪೋಲೀಸರು ಸದರಿ ಕಾರನ್ನು ಅಕ್ರಮ ಮಧ್ಯ ಸಾಗಣೆ ಆರೋಪದ ಮೇರೆಗೆ ಜಪ್ತಿ ಮಾಡಿ, ದೂರು ದಾಖಲಿಸುತ್ತಾರೆ. ಆ ಸಂದರ್ಭದಲ್ಲಿ ಆ ವಾಹನದ ನೊಂದಣಿ ಸರ್ಟಿಫಿಕೇಟ್‌ ʻʼ ಹೆಸರಿನಲ್ಲಿ ಇರುವುದರಿಂದ ಆತನ ವಿರುದ್ದ ದೂರನ್ನು ಪೋಲೀಸರು ದಾಖಲಿಸುತ್ತಾರೆ. ಒಂದು ವೇಳೆ ʻʼ ಮಾರಾಟ ಮಾಡಿದ 14 ದಿವಸಗಳ ಒಳಗಾಗಿ ಲಿಖಿತವಾಗಿ ಮಾಹಿತಿ ಮಾಡಿದ್ದರೇ ಮಾತ್ರ ಅಂತಹ ದೂರು ದಾಖಲಾಗುವುದರಿಂತ ವಿನಾಯ್ತಿಯನ್ನು ಪಡೆಯಬಹುದಾಗಿದೆ. 
ವಿಮೆ:
ವಾಹನದ ನೊಂದಣಿ, ಚಾಲನಾ ಪರವಾನಗಿಯಷ್ಟೇ ಮುಖ್ಯವಾಗಿ ಒಂದು ವಾಹನವನ್ನು ಚಲಾಯಿಸಲು ವಿಮೆಯೂ ಮುಖ್ಯವಾಗಿರುತ್ತದೆ. ಹಾಗಾದರೆ  
ವಿಮೆ ಎಂದರೇನು? ಓರ್ವ ವ್ಯಕ್ತಿಯು ವಾರ್ಷಿಕ, ಮಾಸಿಕ ಅಥವಾ ತ್ರೈಮಾಸಿಕವಾಗಿ ಕಂತುಗಳಲ್ಲಿ ಹಣ ಪಾವತಿಸುವ ಮೂಲಕ ಇನ್ಸೂರೆನ್ಸ್ ಕಂಪನಿಯಿಂದ ವಿಮಾ ಪಾಲಿಸಿ ಕೊಳ್ಳುವುದು ಅಥವಾ ವಿಮೆಗಾಗಿ ಪರಸ್ಪರ ಒಪ್ಪಂದ ಮಾಡಿಕೊಳ್ಳುವುದನ್ನು ವಿಮೆ ಅಥವಾ ಇನ್ಸೂರೆನ್ಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಇನ್ಸೂರೆನ್ಸ್ ಕಂಪನಿಯು ಪಾಲಿಸಿದಾರನಿಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಯಾವುದೋ ನಷ್ಟ ಅಥವಾ ಅಪಾಯದಿಂದ ಸುರಕ್ಷತೆ ನೀಡುತ್ತದೆ.
ಮೋಟಾರು ವಾಹನ ಕಾಯ್ದೆ 1988ರ ಕಲಂ 146ರಂತೆ ವಿಮಾ ಪ್ರಮಾಣಪತ್ರ ಚಾಲ್ತಿಯಲ್ಲಿರದ ಯಾವುದೇ ವಾಹನವನ್ನು ಚಾಲನೆ ಮಾಡುವುದು ಅಥವಾ ಅದನ್ನು ಮತ್ತೊಬ್ಬರು ಚಾಲನೆ ಮಾಡುವುದಕ್ಕೆ ಅವಕಾಶ ಕಲ್ಪಿಸುವುದು ಶಿಕ್ಷಾರ್ಹ ಅಪರಾಧ. ಅಲ್ಲದೆ ಅಂತಹ ಸಂದರ್ಭದಲ್ಲಿ ಅಪಘಾತವು ಸಂಭವಿಸಿ ಆ ಅಪಘಾತದಿಂದಾಗಿ
1)  ಯಾವುದೇ ವ್ಯಕ್ತಿ ಗಾಯಗೊಂಡರೆ ಗಾಯಾಳುಗಳಿಗೆ ಅಥವಾ
2) ಯಾವುದೇ ವ್ಯಕ್ತಿ ಮೃತಪಟ್ಟರೆ ಮೃತನ ವಾರಸುದಾರರಿಗೆ ಅಥವಾ
3) ಯಾವುದೇ ವ್ಯಕ್ತಿಯ ಆಸ್ತಿಪಾಸ್ತಿಗೆ ಹಾನಿಯುಂಟಾದಲ್ಲಿ ಆವ್ಯಕ್ತಿಗೆ
ನಷ್ಟ ಪರಿಹಾರವನ್ನು ಕೊಡುವ ಹೊಣೆಯಿಂದ ವಾಹನದ ವಿಮಾಕರ್ತ ಮುಕ್ತನಾಗುತ್ತಾನೆ. ವಿಮಾ ಪ್ರಮಾಣಪತ್ರ ಚಾಲ್ತಿಯಲ್ಲಿದ್ದೂ ಸಹ ಲೈಸೆನ್ಸ್‌ ಹೊಂದಿರದ ವ್ಯಕ್ತಿ ವಾಹನವನ್ನು ಚಲಾಯಿಸಿದಾಗಲೂ ನಷ್ಟ ಪರಿಹಾರವನ್ನು ಕೊಡುವ ಹೊಣೆಯಿಂದ ವಾಹನದ ವಿಮಾಕರ್ತ ಮುಕ್ತನಾಗುತ್ತಾನೆ.  ಆಗ ಆ ಹೊಣೆ ವಾಹನದ ಮಾಲೀಕನದ್ದಾಗಿರುತ್ತದೆ.
ಹಾಗಾಗಿ ಪ್ರತಿಯೊಂದು ವಾಹನಕ್ಕೆ ಸಂಬಂಧಿಸಿದ ನೊಂದಣಿ ಪ್ರಮಾಣಪತ್ರ, ಚಾಲನಾ ಪರವಾನಗಿ, ಮಾಲೀಕತ್ವ ವರ್ಗಾವಣೆ ಹಾಗೂ ವಿಮೆ ಅತಿ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ವಾಹನ ಕಾನೂನು ಪ್ರಕಾರ ನೊಂದಣಿಯಾಗಿರುವುದನ್ನು, ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡದೇ ಹಾಗೂ ಚಾಲನಾ ಪರವಾನಗಿ ಇಲ್ಲದವರಿಗೆ ವಾಹನ ಚಲಾವಣೆಗೆ ಅವಕಾಶ ಮಾಡಿಕೊಡದೇ ಇರುವುದರ ಬಗ್ಗೆ ಜಾಗೃತರಾಗಿರುವುದರ ಜೊತೆಗೆ ವಿಮೆಯನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿರುವಂತೆ ಕಾಳಜಿವಹಿಸುವುದು ಸೂಕ್ತ. ಈ ಎಲ್ಲಾ ನಿಯಮಗಳನ್ನು ಪರಿಪಾಲನೆ ಮಾಡಿದರೆ ವಾಹನದ ಮಾಲೀಕ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ನೊಂದಣಿ ಪ್ರಮಾಣಪತ್ರ, ಚಾಲನಾ ಪರವಾನಗಿ, ಮಾಲೀಕತ್ವ ವರ್ಗಾವಣೆ ಹಾಗೂ ವಿಮೆಯಷ್ಟೇ ಮುಖ್ಯವಾದುದು ಸಾಮಾಜಿಕ ಜವಾಬ್ದಾರಿ. ರಸ್ತೆಗಳಲ್ಲಿ ವಾಹನಗಳನ್ನು ಚಾಲನೆ ಮಾಡುವಾಗ ರಸ್ತೆ ನಿಯಮಗಳನ್ನು ಪಾಲಿಸುವ, ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ಥಿಪಾಸ್ತಿಗೆ ನಷ್ಟವುಂಟು ಮಾಡದಂತೆ ವಾಹನ ಚಾಲನೆ ಮಾಡುವ,  ಅಪಘಾತವಾದಾಗ ಗಾಯಾಳುವಿಗೆ ಸೂಕ್ತ ಚಿಕಿತ್ಸೆ ನೀಡುವ ಮತ್ತು ಮಾನವೀಯ ಕಾಳಜಿಯನ್ನು ಎತ್ತಿಹಿಡಿಯುವ ಸಾಮಾಜಿಕ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು.


- ದಯಾನಂದಗೌಡ
   ವಕೀಲರು