Advocate

Advocate

Thursday, April 2, 2020


ಜನನ ಮತ್ತು ಮರಣ ನೊಂದಣಿ ಹೇಗೆ ಮತ್ತು ಏಕೆ?

ಮಾತು ಬಲ್ಲವನಿಗೆ ಜಗಳವಿಲ್ಲ
ಊಟ ಬಲ್ಲವನಿಗೆ ರೋಗವಿಲ್ಲ
ಕಾನೂನು ಬಲ್ಲವನಿಗೆ ಶಿಕ್ಷೆಯಿಲ್ಲ.

Ignorance Of Law is not an excuse.ಕಾನೂನಿನ ತಿಳುವಳಿಕೆಯಿಲ್ಲದಿರುವುದು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿನಾಯಿತಿಯಲ್ಲಕಾನೂನು ತಿಳುವಳಿಕೆ ಇಲ್ಲದೆ ಇರುವುದು ತನ್ನ ಮೇಲಿನ ಆರೋಪವನ್ನು ನಿರಾಕರಿಸಲು ರಕ್ಷಣೆಯಾಗಲಾರದು. ಹಾಗಾಗಿ ಕಾನೂನನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾಗುತ್ತದೆ.

ಒಬ್ಬ ವ್ಯಕ್ತಿಯ ಹುಟ್ಟಿನಿಂದ ಮರಣದವರೆವಿಗೂ ಹಲವಾರು ಕಾನೂನುಗಳು ಅನ್ವಯವಾಗುತ್ತವೆ. ಆ ವ್ಯಕ್ತಿ ಹುಟ್ಟಿದ್ದಕ್ಕೂ ದಾಖಲೆ ಬೇಕಾಗುತ್ತದೆ, ಮರಣ ಹೊಂದಿದಕ್ಕೂ ದಾಖಲೆ ಬೇಕಾಗುತ್ತದೆ. ಹುಟ್ಟು ಮತ್ತು ಸಾವನ್ನು ನೊಂದಣಿ ಮಾಡುವ ಪ್ರಕ್ರಿಯೆಯು “ಜನನ ಮತ್ತು ಮರಣ ನೊಂದಣಿ ಕಾಯ್ದೆ 1969” ರಂತೆ ನಡೆಯುತ್ತದೆ. ಹಾಗಾಗಿ ಈ ಕಾಯ್ದೆಯನ್ನು ಇಂದು ಅರಿಯೋಣ;

ಜನನ ಮತ್ತು ಮರಣದ ನೊಂದಣಿಯ ಅಗತ್ಯವೇನು?

ಒಬ್ಬ ವ್ಯಕ್ತಿ ಜನನವಾದ ಮತ್ತು ಮರಣವನ್ನು ರುಜುವಾತು ಪಡಿಸಲು ಇರುವ ಪ್ರಾಥಮಿಕ ದಾಖಲೆ ಎಂದರೆ ಜನನ ಮತ್ತು ಮರಣ ಪ್ರಮಾಣಪತ್ರ. 1980ರ ನಂತರ ಹುಟ್ಟಿರುವ ಎಲ್ಲರಿಗೂ ಜನನ ಪ್ರಮಾಣಪತ್ರ ಕಡ್ಡಾಯವಾಗಿದೆ. ಹಾಗಾಗಿ ಪಾಸ್‌ ಪೋರ್ಟ್‌ನಂತಹ ಹಲವಾರು ಸೌಲಭ್ಯಗಳನ್ನು ಪಡೆಯಲು ಜನನ ಪ್ರಮಾಣಪತ್ರ ಅತ್ಯವಶ್ಯಕವಾಗಿರುತ್ತದೆ. ಅಲ್ಲದೇ ಮರಣ ಹೊಂದಿದ ವ್ಯಕ್ತಿಯು ಸಂಪಾದಿಸರಬಹುದಾದ ಸ್ಥಿರ ಹಾಗೂ ಚರ ಸ್ವತ್ತಿನ ವರ್ಗಾವಣೆಗೆ ಆ ವ್ಯಕ್ತಿಯ ಮರಣ ಪ್ರಮಾಣಪತ್ರ ಅಗತ್ಯವಾಗಿರುತ್ತದೆ. ಹಾಗಾಗಿ ಜನನ ಮತ್ತು ಮರಣದ ನೊಂದಣಿಯು ಅವಶ್ಯವಾಗಿರುತ್ತದೆ ಹಾಗೂ ಕಡ್ಡಾಯವಾಗಿರುತ್ತದೆ.

ಜನನ ಮತ್ತು ಮರಣವನ್ನು ನೊಂದಾಯಿಸುವುದು ಎಲ್ಲಿ?

ಪ್ರತಿಯೊಂದು ಗ್ರಾಮ, ನಗರ, ಹಾಗೂ ಸ್ಥಳೀಯ ಮಟ್ಟದಲ್ಲಿ ಜನನ ಮತ್ತು ಮರಣ ನೊಂದಣಾಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಗ್ರಾಮ ಪಂಚಾಯತ್‌, ಮುನಿಸಿಪಾಲಿಟಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜನನ ಹಾಗೂ ಮರಣವನ್ನು ನೊಂದಾಯಿಸಬಹುದಾಗಿರುತ್ತದೆ. ಇಂತಹ ಜನನ ಮತ್ತು ಮರಣ ನೊಂದಣಾಧಿಕಾರಿಗಳನ್ನು ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಜಿಲ್ಲಾ ನೊಂದಣಾಧಿಕಾರಿಗಳು ಹಾಗೂ ಮುಖ್ಯ ನೊಂದಣಾಧಿಕಾರಿಗಳು ನಿಯಂತ್ರಣ ಮಾಡಲಿದ್ದು, ಅವರಿಗೆ ಮಾರ್ಗೋಪಾಯಗಳನ್ನೂ ಸಹ ನೀಡುತ್ತಿರುತ್ತಾರೆ.

ಜನನ ಮತ್ತು ಮರಣದ ಮಾಹಿತಿಯನ್ನು ಯಾರು ನೀಡಬಹುದು?

1. ಒಂದು ವೇಳೆ ಜನನ ಅಥವಾ ಮರಣ ಮನೆಯಲ್ಲಿ ಸಂಭವಿಸಿದ್ದರೆ, ಆ ಕುಟುಂಬದ ಹಿರಿಯ ಸದಸ್ಯರು ಅಥವಾ ಆ ಸಮಯದಲ್ಲಿ ಹಿರಿಯ ಸದಸ್ಯರು ಇಲ್ಲವಾದ ಪಕ್ಷದಲ್ಲಿ ಆ ಸಮಯದಲ್ಲಿ ಹಾಜರಿದ್ದ ಸಂಬಂಧಿಕರೂ ಕೂಡ ಜನನ ಹಾಗೂ ಮರಣದ ಮಾಹಿತಿಯನ್ನು ಜನನ ಮತ್ತು ಮರಣ ನೊಂದಣಾಧಿಕಾರಿಗಳಿಗೆ ಮೌಖಿಕವಾಗಿ ಅಥವಾ ಲಿಖಿತವಾಗಿ ತಿಳಿಸಬೇಕಾಗಿರುತ್ತದೆ. ಆ ಸಂದರ್ಭದಲ್ಲಿ ಮಾಹಿತಿದಾರರ ವಿವರವನ್ನು ಸಹಿಯನ್ನು ಪಡೆಯಲಾಗುತ್ತದೆ. 
2. ಒಂದು ವೇಳೆ ಜನನ ಅಥವಾ ಮರಣ ಆಸ್ಪತ್ರೆ, ನರ್ಸಿಂಗ್‌ ಹೋಂ,ನಂತಹ ಸ್ಥಳಗಳಲ್ಲಿ ಸಂಭವಿಸಿದ್ದರೆ, ಆ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಅಥವಾ ಅವರಿಂದ ಅನುಮತಿ ಪಡೆದ ಸಿಬ್ಬಂದಿ ವರ್ಗದವರು ಮಾಹಿತಿ ನೀಡಬೇಕಾಗಿದ್ದರೆ
3. ಒಂದು ವೇಳೆ ಜನನ ಅಥವಾ ಮರಣ ಜೈಲಿನಲ್ಲಾಗಿದ್ದರೆ, ಆ ಜೈಲಿನ ಜವಾಬ್ದಾರಿ ಹೊಂದಿರುವ ಅಧಿಕಾರಿ 
4. ಒಂದು ವೇಳೆ ಜನನ ಅಥವಾ ಮರಣವು ಮದುವೆ ಛತ್ರ, ರೆಸಾರ್ಟ್‌, ಲಾಡ್ಜ್‌ ಇಂತಹ ಸ್ಥಳಗಳಲ್ಲಾದರೇ ಅಂತಹ ಸ್ಥಳಗಳ ಮೇಲ್ವಿಚಾರಕರು ಮಾಹಿತಿಯನ್ನು ನೀಡಬೇಕಾಗುತ್ತದೆ. 
5.  ಒಂದು ವೇಳೆ ಜನನ ಅಥವಾ ಮರಣವು ಗ್ರಾಮಗಳ ಸಾರ್ವಜನಿಕ ಸ್ಥಳದಲ್ಲಾಗಿದ್ದರೆ ಆ ಗ್ರಾಮದ ಮುಖ್ಯಸ್ಥ ಅಥವಾ ಆ ವ್ಯಾಪ್ತಿಯ ಅರಕ್ಷಕ ಠಾಣೆಯಲ್ಲಿನ ಪೋಲೀಸ್‌ ಅಧಿಕಾರಿ ಮಾಹಿತಿ ನೀಡಬೇಕಾಗಿರುತ್ತದೆ
6. ವಿಶೇಷ ಸಂದರ್ಭಗಳಲ್ಲಿ ಪ್ಲಾಂಟೇಷನ್‌ ( ಟೀ, ಕಾಫಿ, ಎಸ್ಟೇಟ್ ಅಥವಾ ನಾಲ್ಕು ಎಕರೆಗೂ ಹೆಚ್ಚಿನ ವ್ಯವಸಾಯದ ಭೂಮಿ) ನಲ್ಲಾಗಿದ್ದರೆ, ಆ ಪ್ಲಾಂಟೇಷಿನನ ಮೇಲ್ವಿಚಾರಕರು ಮಾಹಿತಿದಾರನಾಗಿರುತ್ತಾರೆ.

ಜನನ ಮತ್ತು ಮರಣದ ಮಾಹಿತಿಯನ್ನು ನೀಡಲು ನಿಗಧಿ ಮಾಡಿರುವ ಅವಧಿ:

1. ಯಾವುದೇ ಜನನ ಮತ್ತು ಮರಣದ ಮಾಹಿತಿಯನ್ನು ಸಂಭವಿಸಿದ ಕೂಡಲೇ ಮಾಹಿತಿಯನ್ನು ನೀಡಬೇಕಾಗಿರುತ್ತದೆ.. ಜನನ ಮತ್ತು ಮರಣ ಸಂಭವಿಸಿದ 30 ದಿವಸಗಳ ಒಳಗೆ ಜನನ ಮತ್ತು ಮರಣದ ನೊಂದಣಿಯನ್ನು ನೊಂದಣಾಧಿಕಾರಿಯು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ನೊಂದಣಿ ಮಾಡಲಾಗುತ್ತದೆ.
2. ಒಂದು ವೇಳೆ 30 ದಿವಸಗಳ ಒಳಗಾಗಿ ಜನನ ಮತ್ತು ಮರಣದ ನೊಂದಣಿಯು ಮಾಡದಿದ್ದ ಪಕ್ಷದಲ್ಲಿ ಸಂಬಂದಿಸಿದ ನೊಂದಣಾಧಿಕಾರಿಯಲ್ಲಿ ಒಂದು ವರ್ಷದ ವರೆವಿಗೂ ಶುಲ್ಕ ಪಡೆದು ನೊಂದಾಯಿಸಬಹುದಾಗಿರುತ್ತದೆ.
3. ಒಂದು ವರ್ಷದ ಅವಧಿ ಮೀರಿದ ನೊಂದಣಿಯನ್ನು ಜನನ ಮತ್ತು ಮರಣದ ನೊಂದಣಿಯನ್ನು ನೊಂದಣಾಧಿಕಾರಿಯು ನೊಂದಣಿ ಮಾಡಲು ಸಾಧ್ಯವಿರುವುದಿಲ್ಲ. ಒಂದು ವರ್ಷ ಮೀರಿದ ನೊಂದಣಿಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟರಲ್ಲಿ ( ನ್ಯಾಯಾಲಯದಲ್ಲಿ) ಅರ್ಜಿ ಸಲ್ಲಿಸಿ ನೊಂದಣಿ ಮಾಡಲು ಅನುಮತಿಯನ್ನು ಪಡೆಯಬಹುದಾಗಿರುತ್ತದೆ. ಆದರೆ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜನನ ಅಥವಾ ಮರಣಕ್ಕೆ ಸಂಬಂದಿಸಿದಂತೆ ಪೂರಕ ದಾಖಲೆಯನ್ನು ಒದಗಿಸಬೇಕಾಗಿರುತ್ತದೆ.

ಮಗುವಿನ ಹೆಸರು ನೊಂದಣಿ:

ಜನನ ಸಮಯಲ್ಲಿ ಸಾಮಾನ್ಯವಾಗಿ ಗಂಡು ಹಾಗೂ ಹೆಣ್ಣು ಎಂಬುದಾಗಿ ಮಾತ್ರ ಜನನ ಪ್ರಮಾಣ ಪತ್ರದಲ್ಲಿ ನೊಂದಣಿ ಮಾಡಲಾಗಿರುತ್ತದೆ. ಅಂತಹ ಮಗುವಿಗೆ ಹೆಸರಿಟ್ಟ ಕೂಡಲೇ ಮಗು ಜನಿಸಿದ ಒಂದು ವರ್ಷದ ಅವಧಿಯೊಳಗೆ ಹೆಸರನ್ನು ನೊಂದಣಿ ಮಾಡಿಸಬಹುದಾಗಿರುತ್ತದೆ.

ತಿದ್ದುಪಡಿಗಳು:

ಒಂದು ವೇಳೆ ತಪ್ಪಾಗಿ ಹೆಸರು, ಉಪನಾಮ ಮುಂತಾದವು ನಮೂದಾಗಿದ್ದರೇ ಜನನ ಮತ್ತು ಮರಣ ನೊಂದಣಾಧಿಕಾರಿಗೆ ಮಾಹಿತಿ ನೀಡಿ ಅಂತಹ ತಪ್ಪುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿರುತ್ತದೆ.


- ದಯಾನಂದಗೌಡ
   ವಕೀಲರು







No comments:

Post a Comment